ಛಾಯಾನಾಟಕ -
ಈ ಶಬ್ದ ಇಲ್ಲಿ ಮುಖ್ಯವಾಗಿ, ಇಂಗ್ಲಿಷಿನ ಷ್ಯಾಡೋ ಪ್ಲೇ (ಗೊಂಬೆ ನೆರಳಿನ ಆಟ) ಎಂಬರ್ಥದಲ್ಲಿ ಬಳಕೆಯಾಗಿದೆ. ಅತಿ ಪ್ರಾಚೀನ ಕಾಲದಿಂದ ವಿಶಿಷ್ಟ ಜನಪದ ಕಲೆಯಾಗಿ ಭಾರತದಲ್ಲಿದ್ದ ತೊಗಲುಗೊಂಬೆ ಆಟವೇ ಕಾಲಕ್ರಮೇಣ ಜಗತ್ತಿನ ಹಲವು ಕಡೆಗಳಲ್ಲಿ ಹರಡಿ ಬೇರೆಬೇರೆ ರೂಪ ತಾಳಿತಷ್ಟೆ. ಈ ಪ್ರಕಾರವನ್ನು ಕುರಿತ ಸಂಕ್ಷಿಪ್ತ ಇತಿಹಾಸದ ಜೊತೆಗೆ, ಈ ಜನಪದ ಕಲೆಯ ಆಧಾರದ ಮೇಲೆ ಭಾರತದಲ್ಲಿ ನಡೆದ ಪ್ರಯೋಗವನ್ನು ಕುರಿತ ಪ್ರಸ್ತಾಪವೂ ಇಲ್ಲಿದೆ.

	ಛಾಯಾನಾಟಕದಲ್ಲಿ ಬಳಸುವ ಗೊಂಬೆಗಳು ಹದಗೊಳಿಸಿದ ತೊಗಲಿನಿಂದ ತಯಾರಾಗುತ್ತವೆ. ಅಗಲವೂ ತೆಳವೂ ಆದ ಚರ್ಮದ ಮೇಲೆ ರೇಖೆಗಳಿಂದ ಚಿತ್ರ ಬರೆದು ಕತ್ತರಿಸಿ ಬಿಡಿಸಿ ವಿವಿಧ ಬಣ್ಣಗಳನ್ನು ಹಚ್ಚಿ ಅಲಂಕರಿಸಿ ಇವನ್ನು ತಯಾರಿಸುತ್ತಾರೆ. ಕೆಲವು ಅಖಂಡವಾದ ಒಂದೇ ತೊಗಲಿನ ತುಂಡಿನಲ್ಲಿ ತಯಾರಾಗಿರುತ್ತವೆ. ಇನ್ನು ಕೆಲವಲ್ಲಿ ದೇಹಭಾಗ ಅಖಂಡವಾಗಿದ್ದು ಅದಕ್ಕೆ ಕೈಕಾಲುಗಳನ್ನು ಸೂತ್ರಗಳಿಂದ ಸೇರಿಸುತ್ತಾರೆ. ಅರೆಪಾರದರ್ಶಕ ಕಾಗದದ ಅಥವಾ ವಸ್ತ್ರದ ಪರದೆಯ ಹಿಂದೆ ಪ್ರಕಾಶಮಾನ ಬೆಳಕನ್ನು ಇಟ್ಟು ಬಿದಿರುಕಡ್ಡಿಗಳು ಸೂತ್ರಗಳು ಮೊದಲಾದವುಗಳಿಂದ ಆಡಿಸಲಾದ ಬಣ್ಣಬಣ್ಣದ ತೊಗಲುಗೊಂಬೆಗಳ ನೆರಳು ಪರದೆಯ ಮೇಲೆ ಪ್ರಕ್ಷೇಪಿತವಾಗುವಂತೆ ಮಾಡುತ್ತಾರೆ. 
(ನೋಡಿ- ಕರ್ನಾಟಕ-ಜಾನಪದ-ನೃತ್ಯ)
(ನೋಡಿ- ಗೊಂಬೆಗಳು)

	ಮೂಲತಃ ಭಾರತದಲ್ಲಿ ರೂಪುಗೊಂಡ ಛಾಯಾನಾಟಕಕ್ಕೆ ಮುಖ್ಯವಾಗಿ ರಾಮಾಯಣ ಮಹಾಭಾರತದ ಕಥೆಗಳನ್ನೇ ಆರಿಸಿಕೊಳ್ಳುತ್ತಿದ್ದರು. ಈ ಜನಪದ ಪ್ರಕಾರ ತನ್ನ ಪರಂಪರೆಯನ್ನು ಭಾರತದ ನೆರೆಯ ದೇಶಗಳಲ್ಲಿಯೂ ಬಿತ್ತಿತ್ತು. ಜಾವಾ ದ್ವೀಪದಲ್ಲಿ ವಿಶೇಷವಾಗಿ ಹರಡಿ ಅಲ್ಲಿಯೂ ಪುರಾಣೇತಿಹಾಸಗಳ ವಸ್ತುವನ್ನೇ ಜೋಡಿಸಿಕೊಂಡು ಅದು ಒಂದು ಮುಖ್ಯ ಜನಪದ ಕಲೆಯಾಗಿ ಬೆಳೆಯಿತು. 15ನೆಯ ಶತಮಾನದಲ್ಲಿ ಅಲ್ಲಿ ಇಸ್ಲಾಂ ಧರ್ಮ ಹರಡಿದಾಗ ನಾಟಕದ ವಸ್ತುವಿನಲ್ಲಿ ಬೇರೆ ಬೇರೆ ಕಥೆಗಳು ಸೇರಿಕೊಂಡವು. ಹದಗೊಳಿಸದ ಎಮ್ಮೆ ಚರ್ಮದಲ್ಲಿ ಮಾಡಿದ ಜಾವಾ ಗೊಂಬೆಗಳು ಬರುಬರುತ್ತ ಖ್ಯಾತವಾದವು. ಸೂತ್ರಧಾರ (ಡಲಾಂಗ್) ಪರದೆಯ ಹಿಂದೆ ಪಾತ್ರಗಳ ನೆರಳುಗಳನ್ನು ಆಡಿಸಿ ತೋರಿಸುತ್ತ ಅವುಗಳ ಮಾತುಗಳನ್ನು ತಾನೇ ಅನ್ನುತ್ತಾ, ವಾದ್ಯಮೇಳವನ್ನು ನಿರ್ದೇಶಿಸುತ್ತಾ ಹೋಗುವುದು ಆಟದ ರೀತಿ.

	ಛಾಯಾನಾಟಕದ ಪರಂಪರೆ ಜಾವಾದಿಂದ ಬಾಲಿ ಮೊದಲಾದ ಬೇರೆ ದ್ವೀಪಗಳಿಗೆ ಹರಡಿದಾಗ ಅಲ್ಲಿನವರು ಅದರಲ್ಲಿ ಬಳಸಲಾಗುತ್ತಿದ್ದ ಭಾರತೀಯ ಕಥಾವಸ್ತುವನ್ನೂ ಶೈಲಿಯನ್ನೂ ಉಳಿಸಿಕೊಂಡರು. ಅಲ್ಲಿಂದ ಮುಂದೆ ಅದು ಸಯಾಂ, ಮಲಯ, ಬರ್ಮ, ಕಾಂಬೋಡಿಯ ಮುಂತಾದ ಕಡೆಗಳಲ್ಲೂ ವ್ಯಾಪಕವಾಗಿ ಪಸರಿಸಿತು. ವಿಶೇಷವಾಗಿ ಚೀನದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಛಾಯಾನಾಟಕ ಹನ್ ವಂಶದ ಅರಸರ ಕಾಲದಲ್ಲಿದ್ದ ಆಸ್ಥಾನದ ಸ್ತ್ರೀಯರ ಮನೋರಂಜನೆಯ ಸಲುವಾಗಿಯೇ ಹುಟ್ಟಿತೆಂಬ ಐತಿಹ್ಯಗಳು ಚೀನದಲ್ಲಿವೆ. ಅಲ್ಲಿ ನಾಟಕಕ್ಕೆ ಬೇಕಾದ ಗೊಂಬೆಗಳನ್ನು ಕತ್ತೆಯ ಚರ್ಮದಿಂದ ತಯಾರಿಸಿ ಉಜ್ವಲ ವರ್ಣಗಳಿಂದ ಸಿಂಗರಿಸುತ್ತಿದ್ದರೆನ್ನಲಾಗಿದೆ.

ಛಾಯಾನಾಟಕದ ಸಂಪ್ರದಾಯ ಪಶ್ಚಿಮ ದೇಶಗಳಿಗೆ ಹರಡಿದುದು ಪರ್ಷಿಯ, ತುರ್ಕಿಗಳ ಮೂಲಕ. ತುರ್ಕಿಯಲ್ಲಿ ವಿಶಿಷ್ಟವಾಗಿ ರೂಪುಗೊಂಡ ಈ ಜನಪದ ಪ್ರಭೇದದಲ್ಲಿ ಬರುವ ಕರಗeóï ಮತ್ತು ಅವನ ಗೆಳೆಯ ಹಾಜಿವಾದ್ ಎಂಬ ವಿನೋದ ಪಾತ್ರಗಳು ವಿಶೇಷ ಜನಮನ್ನಣೆಗೆ ಪಾತ್ರವಾದವು. ಗೊಂಬೆಗಳನ್ನು ಒಂಟೆಯ ಚರ್ಮದಲ್ಲಿ ಮಾಡಿ ಬಣ್ಣ ಹಾಕುತ್ತಿದ್ದರು. ವಿಶೇಷವಾಗಿ ತುರ್ಕಿಯ ಛಾಯಾನಾಟಕದಲ್ಲಿ ಅಫೀಮಿನ ಗೀಲು ಹಿಡಿದವ, ಪೆದ್ದ ಮೊದಲಾದ ಸ್ಥಾಯಿ ಪಾತ್ರಗಳು ಪರ್ಷಿಯದವ, ಆಲ್ಬೇನಿಯದವ, ಯೆಹೂದ್ಯ ಮೊದಲಾದ ಪ್ರಾತಿನಿಧಿಕ ಪಾತ್ರಗಲೂ ಇರುತ್ತಿದ್ದುವು. ಕ್ರಮೇಣ ಈ ನಾಟಕಪ್ರಕಾರ ಗ್ರೀಸಿನಲ್ಲೂ ಹರಡಿ ಜನಪ್ರಿಯವಾಯಿತು. ಅಲ್ಲಿ ಅಂಟೊನಿಯೊ ಮಾಲ್ಲಾಸ್ ಮುಂತಾದ ಖ್ಯಾತ ತೊಗಲುಗೊಂಬೆ ಆಟಗಾರರು ತಾವು ನೀಡುತ್ತಿದ್ದ ಪ್ರದರ್ಶನಗಳಿಗೆ ವಿಶೇಷ ಪ್ರಾದೇಶಿಕ ಲಕ್ಷಣಗಳು ಬರುವಂತೆ ಮಾಡಿದರು. ಅಲ್ಲಿಂದ ಮುಂದೆ ಛಾಯಾನಾಟಕ ಉತ್ತರ ಆಫ್ರಿಕದ ಇಸ್ಲಾಮಿ ದೇಶಗಳಿಗೂ ಹರಡಿತು.

	ಇಟಲಿಯಲ್ಲಿ ಛಾಯಾರಂಗಭೂಮಿಯ ಪರಂಪರೆ ಹದಿನೇಳನೆಯ ಶತಮಾನದಷ್ಟು ಹಿಂದೆಯೇ ಬೆಳೆದಿದ್ದು ಅದು ಅಲ್ಲಿಂದ ಪಶ್ಚಿಮ ಯೂರೋಪಿನ ದೇಶಗಳಿಗೂ ಹಬ್ಬಿತ್ತು. ಫ್ರಾನ್ಸಿನ ತೊಗಲುಬೊಂಬೆ ಆಟದಲ್ಲಿ ಬಣ್ಣವಿಲ್ಲದ ಗೊಂಬೆಗಳನ್ನು ಮಾತ್ರ ಬಳಸುತ್ತಿದ್ದು ಅವು ಕೇವಲ ಕಪ್ಪು ನೆರಳಿನ ಚಿತ್ರಗಳಾಗಿ ಮೂಡುತ್ತಿದ್ದುವು. ಡೋಮಿನಿಕ್ ಸಿರಾಫಿನಾ ಎಂಬಾತ 1774ರಲ್ಲಿ ವರ್ಸಾರ್ಯ ನಗರದಲ್ಲಿ ಒಂದು ಛಾಯಾನಾಟಕ ಪ್ರದರ್ಶನ ಏರ್ಪಡಿಸಿದ. ಅದು ಜನರ ಮನವನ್ನು ಪ್ರಬಲವಾಗಿ ಸೆಳೆದಿದ್ದರಿಂದ ಪುನಃ ಅದನ್ನು ಪ್ಯಾರಿಸ್‍ನ ಪ್ಯಾಲೆ ರೋಯಲ್ ಮಂದಿರದಲ್ಲಿ ಪ್ರದರ್ಶಿಸಲಾಯಿತು. 1859ರವರೆಗೂ ಈ ಪ್ರದರ್ಶನಗಳು ಜನಪ್ರಿಯತೆಯನ್ನು ಉಳಿಸಿಕೊಂಡವು. ಅಲ್ಲಿಂದ ಮುಂದೆ ಡೊಮಿನಿಕ್ ಸಿರಾಫಿನಾನ ವಂಶಸ್ಥರು ಬ್ರೋಕನ್ ಬ್ರಿಜ್ ಮುಂತಾದ ವಿಶೇಷ ನಾಟಕಗಳನ್ನು ರಚಿಸಿ ಅವನ್ನು ಛಾಯಾನಾಟಕದ ತಂತ್ರಕ್ಕೆ ಅಳವಡಿಸಿ ತೋರಿಸಿದರು. ಅತ್ಯಂತ ನೂತನವೂ ವಿಶಿಷ್ಟವೂ ಆದ ನಾಟಕಗಳನ್ನು ಛಾಯಾರಂಗಭೂಮಿಯಲ್ಲಿ ಪ್ರದರ್ಶಿಸುವಾಗ ಶ್ರೇಷ್ಠ ಕಲಾವಿದರು, ಸಂಗೀತಗಾರರು, ವಾದ್ಯಮೇಳದವರು, ಸಾಹಿತಿಗಳು ಮುಂತಾದವರ ನೆರವನ್ನು ಪಡೆಯಲಾಗುತ್ತಿತ್ತು. ಫ್ರಾನ್ಸಿನ ಹಲವು ನಗರಗಳಲ್ಲಿ ಪ್ರದರ್ಶಿತವಾದ ಛಾಯಾನಾಟಕ ಕ್ಯಾಬರೆಗಳು 1923ರವರೆಗೂ ಪ್ರಸಿದ್ಧವಾಗಿದ್ದವು.

	ಛಾಯಾನಾಟಕ 18ನೆಯ ಶತಮಾನದ ಅಮೆರಿಕದಲ್ಲಿ ವ್ಯಾಪಕವಾಗಿ ಹರಡಿತಾದರೂ ಆ ಶತಮಾನದ ಕೊನೆಯ ಹೊತ್ತಿಗೆ ಖಿಲವಾಯಿತು. 1880ರ ಅನಂತರ ಅದನ್ನು ಮತ್ತೆ ಪುನರುಜ್ಜಿವನಗೊಳಿಸಲಾಯಿತು. 1893ರಲ್ಲಿ ಷಿಗಾಗೋ ವಲ್ರ್ಡ್‍ಫೇರ್ ಉತ್ಸವದಲ್ಲಿ ಲಿಯಾನ್ ಚಾರ್ಲಸ್ ಮ್ಯಾರೋ ಎಂಬ ಫ್ರೆಂಚ್ ಕಲಾವಿದ ನೀಡಿದ ಛಾಯಾನಾಟಕ ಪ್ರದರ್ಶನ ವಿಶೇಷವಾಗಿ ಜನರ ಮನಸೆಳೆಯಿತು. ಗ್ರೀಸಿನಿಂದ ಅಮೆರಿಕಕ್ಕೆ ವಲಸೆ ಹೋದವರು ತುರ್ಕಿಯ ಕರಗeóï ನಾಟಕದ ರೂಪಾಂತರಗಳನ್ನು ಅಲ್ಲಿ ಬಿತ್ತಿ ಬೆಳೆಸಿದರು. ಷಿಕಾಗೊ, ಡೆಟ್ರಾಯಿಟ್ ನಗರಗಳಲ್ಲಿನ ಕಾಫೀ ಹೌಸುಗಳಲ್ಲಿ ನಡೆಯುತ್ತಿದ್ದ ಗ್ರೀಕ್ ಛಾಯಾನಾಟಕ ಪ್ರದರ್ಶನಗಳು ಮೆಚ್ಚುಗೆ ಪಡೆದವು.
 ಆಧುನಿಕ ಯುಗದಲ್ಲಿ ಪಾಲಿನ್ ಬೆಂಟನ್ ಮೊದಲಾದವರು ಅಪ್ಪಟ ಚೀನೀ ಸ್ವರೂಪದ್ದೆಂದು ಹೇಳಲಾದ ಛಾಯಾನಾಟಕಗಳನ್ನು ಆಡಿಸಿ ತೋರಿಸಿದರು. ಮೊದಲನೆಯ ಮಹಾಯುದ್ಧದ ಅನಂತರ ಜರ್ಮನಿಯಲ್ಲಿ ಕಪ್ಪು ನೆರಳಿನ ಸ್ತಬ್ಧ ಛಾಯಾಚಿತ್ರಗಳ ಫಿಲ್ಮುಗಳನ್ನು ಪರದೆಯ ಮೇಲೆ ಆಡಿಸಿ ತೋರಿಸಲಾಯಿತು. ಚಲನಚಿತ್ರಗಳಿಗೆ ಇದೇ ನಾಂದಿಯಾಯಿತೆಂದು ಹೇಳುವುದುಂಟು.

	ಕರ್ಣಾಟಕದಲ್ಲಿ 1945ರ ಸುಮಾರಿನಲ್ಲಿ ಛಾಯಾನಾಟಕದ ಪ್ರಕಾರವನ್ನು ಡಾ.ಶಿವರಾಮಕಾರಂತರು ಅಪೂರ್ವವಾಗಿ ಪ್ರಯೋಗಿಸಿದರು. ತೊಗಲುಗೊಂಬೆ ಆಟದಿಂದ ಸ್ಫೂರ್ತಿ ಪಡೆದು ಅವರು ತಮ್ಮ ಕೆಲವು ಗೀತನಾಟಕಗಳನ್ನು ಛಾಯಾ ನಾಟಕದ ಮಾಧ್ಯಮದಲ್ಲಿ ಆಡಿಸಿದರು. ವಿಶೇಷ ವಸ್ತ್ರಾಲಂಕಾರಭೂಷಿತರಾದ ನಟ-ನಟಿಯರೇ ತೆಳು ಪರದೆಯ ಹಿಂದೆ ಚಲಿಸುತ್ತ ಹಾಡು, ನೃತ್ಯಗಳ ಮೂಲಕ ನಾಟಕದ ಕಥೆಯನ್ನು ಅರ್ಥೈಸುವಂತೆ ಅನುಗೊಳಿಸಿದರು. ಮುಖ್ಯವಾಗಿ ಕಾರಂತರ ಲವಕುಶ ಎಂಬ ಗೀತನಾಟಕ 1945-46ರ ಸುಮಾರಿನಲ್ಲಿ ಬೆಂಗಳೂರಿನಲ್ಲಿ ಪ್ರದರ್ಶಿತವಾದಾಗ ಅದೊಂದು ಅಪೂರ್ವ ಪ್ರಯೋಗವೆನಿಸಿತು. ಶಿಲ್ಪಕಲೆಗೂ ನಾಟ್ಯಾಭಿನಯಕ್ಕೂ ನಡುವಣ ಸಾದೃಶ್ಯ ಸೂಚಿಸಲೆಂಬ ಪ್ರಾಯೋಗಿಕ ದೃಷ್ಟಿಯಿಂದ ಬರೆದು ಅಭಿನಯಿಸಿದ ಕಾರಂತರ ಗೀತನಾಟಕಗಳು ವಿಶಿಷ್ಟ ಸಾಹಿತ್ಯ ಕೃತಿಗಳಿವೆ.
(ಎಚ್.ಕೆ.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ